-
ಪುಸ್ತಕದ ಹೆಸರು: ‘ಛಂದಸ್ಸಾರ’
-
ಲೇಖಕನ ಹೆಸರು:
ಗುಣಚಂದ್ರ
-
ಕಾಲ:
17 ನೆಯ ಶತಮಾನ, ಸುಮಾರು ಕ್ರಿ.ಶ. 1650(ಎಲ್. ಬಸವರಾಜು ಅವರು ಗುಣಚಂದ್ರನು ಹದಿನೆಂಟನೆಯ ಶತಮಾನಕ್ಕೆ
ಸೇರಿದವನೆಂದು ಹೇಳಿದ್ದಾರೆ)
-
ವಸ್ತು:
ಛಂದಸ್ಸು
-
ಪರಿಚಯ:
ಜೈನ ವಿದ್ವಾಂಸನಾದ ಗುಣಚಂದ್ರನ ಛಂದಸ್ಸಾರವು, ಕನ್ನಡ ಛಂದಸ್ಸನ್ನು ಕುರಿತ ಚಿಕ್ಕ ಪುಸ್ತಕ. ಇದು ಕೇದಾರಭಟ್ಟನು
ಸಂಸ್ಕೃತದಲ್ಲಿ ಬರೆದಿರುವ ‘ವೃತ್ತ
ರತ್ನಾಕರ’
ಎಂಬ ಕೃತಿಯ ಮಾದರಿಯನ್ನು ಅನುಕರಿಸುತ್ತದೆ. ಇದರಲ್ಲಿ, ಕನ್ನಡ ಛಂದಸ್ಸಿಗೆ ಸಂಬಂಧಿಸಿದ ವಿಭಿನ್ನ ವಿಷಯಗಳನ್ನು
ಕುರಿತ ಐದು ಆಧಿಕರಣಗಳಿವೆ.(ಅಧ್ಯಾಯ) ಮೊದಲನೆಯ ಅಧ್ಯಾಯದಲ್ಲಿ, ಪ್ರಾಥಮಿಕ ಸಂಗತಿಗಳಾದ ಲಘು, ಗುರು,
ಗಣ, ಯತಿ, ವಡಿ ಮುಂತಾದವುಗಳ ಪರಿಚಯವಿದೆ. ಕನ್ನಡದ ಪ್ರಮುಖ ಛಂದೋರೂಪವಾದ ಷಟ್ಪದಿಯು, ಎರಡನೆಯ ಅಧ್ಯಾಯದ
ಕೇಂದ್ರವಸ್ತು. ಗುಣಚಂದ್ರನು, ಬೇರೆ ಬೇರೆ ಮಾತ್ರಾಗಣ ಷಟ್ಪದಿಗಳ ಲಕ್ಷಣಗಳನ್ನು ವಿವರಿಸುತ್ತಾನೆ.
ಲಕ್ಷಣಗಳನ್ನು ಹೇಳುವ ಪದ್ಯಗಳೇ ಆಯಾ ಷಟ್ಪದಿಗೆ ನಿದರ್ಶನಗಳೂ ಆಗಿವೆ. ಅದಲ್ಲದೆ, ಆರ್ಯಾ, ಗೀತಿಕೆ,
ಕಂದಪದ್ಯ ಮುಂತಾದ ಇತರ ಛಂದೋಬಂಧಗಳ ಪ್ರಸ್ತಾಪವೂ ಇಲ್ಲಿಯೇ ಬರುತ್ತದೆ. ಮೂರನೆಯ ಅಧ್ಯಾಯವು ಸಂಸ್ಕೃತದಿಂದ
ತೆಗೆದುಕೊಂಡಿರುವ ಅಕ್ಷರವೃತ್ತಗಳ ನಿರೂಪಣೆಗೆ ಮೀಸಲಾಗಿದೆ. ಇಲ್ಲಿ ಅನೇಕ ವೃತ್ತಗಳನ್ನು ವಿವರಿಸಲಾಗಿದೆ.
ನಾಲ್ಕನೆಯ ಅಧ್ಯಾಯವು, ಮಾತ್ರಾಗಣ ಛಂದಸ್ಸನ್ನು ಬಳಸುವ ಇತರ ಛಂದೋರೂಪಗಳ ವಿವರಣೆಯನ್ನು ಕೊಡುತ್ತದೆ.
ದಂಡಕ, ಅನುಷ್ಟುಪ್, ವೈತಾಳೀಯ, ದ್ವಿಪಾದ, ಚತುಷ್ಪಾದ, ಅರ್ಧ ಸಮವೃತ್ತ, ವಿಷಮ ವೃತ್ತ ಮುಂತಾದವುಗಳ
ಬಗ್ಗೆ ಅಪರೂಪದ ಮಾಹಿತಿಯಿದೆ. ಐದನೆಯ ಅಧ್ಯಾಯವನ್ನು ತಾಳವೃತ್ತಾದಿ ಪ್ರಕರಣವೆಂದು ಕರೆದಿದ್ದಾನೆ.
ಇಲ್ಲಿ ದ್ವಿಪದಿ, ತ್ರಿವುಡೆ, ರಗಳೆ, ಸೀಸಪದ್ಯ, ಲಾವಳಿ(ಣಿ) ಮುಂತಾದ ರೂಪಗಳನ್ನು ಕೇವಲ ಹೆಸರಿಸಲಾಗಿದೆ.
ಯಾವುದರ ಬಗ್ಗೆಯೂ ವಿವರವಾದ ಮಾಹಿತಿಗಳಿಲ್ಲ. ಆದರೂ ಇವುಗಳ ಪ್ರಸ್ತಾಪವೇ ಮುಖ್ಯವಾದ ವಿಷಯ. ಮೂಲ ಕನ್ನಡ
ಛಂದಸ್ಸಿನ ನೆಲೆಯಾದ ಅಂಶಗಣಗಳ ಬಗ್ಗೆ ಇಲ್ಲಿ ಯಾವ ಮಾಹಿತಿಯೂ ಇಲ್ಲದಿರುವುದು ಕುತೂಹಲಕರವಾದ ವಿಷಯ.
ಛಂದಸ್ಸಾರವು ಗಾತ್ರದಲ್ಲಿ ಚಿಕ್ಕದಾದರೂ, ನಿದರ್ಶನಗಳ ಕೊರತೆ ಇದ್ದರೂ ಅನೇಕ ಅಪರೂಪದ ಸಂಗತಿಗಳನ್ನು
ಪ್ರಸ್ತಾಪಿಸುತ್ತದೆ.
- ಪ್ರಕಟಣೆಯ ಇತಿಹಾಸ:
ಅ. ಸಂ. ಎಂ. ಮರಿಯಪ್ಪಭಟ್ಟ, 1943,
‘ಆನಲ್ಸ್ ಆಫ್ ಓರಿಯೆಂಟಲ್ ರಿಸರ್ಚ್’, ಸಂಪುಟ-6, ಸಂಚಿಕೆ-2.
ಆ. ಸಂ. ಎಲ್. ಬಸವರಾಜು, 1974, (ಕನ್ನಡ ಛಂದಸ್ಸಂಪುಟದಲ್ಲಿ),
ಗೀತಾ ಬುಕ್ ಹೌಸ್, ಮೈಸೂರು.
-
ಮುಂದಿನ ಓದು ಮತ್ತು ಲಿಂಕುಗಳು:
ಎಲ್. ಬಸವರಾಜು ಅವರ ‘ಕನ್ನಡ
ಛಂದಸ್ಸಂಪುಟ’ದ
ಪ್ರವೇಶಿಕೆ ಮತ್ತು ಕನ್ನಡ ಛಂದಸ್ಸನ್ನು ಕುರಿತ ಟಿ.ವಿ. ವೆಂಕಟಾಚಲಶಾಸ್ತ್ರೀ ಅವರ ಕೃತಿಗಳು.
-
ಅನುವಾದ:
|